ಉತ್ತರಾಂಚಲ: ಭಾರತದ ಒಂದು ರಾಜ್ಯ. ದೇಶದ ಉತ್ತರದಲ್ಲಿರುವ ಈ ರಾಜ್ಯವನ್ನು ಪೂರ್ವದಲ್ಲಿ ನೇಪಾಳ, ಉತ್ತರದಲ್ಲಿ ಚೀನ(ಟಿಬೆಟ್) ಪಶ್ಚಿಮದಲ್ಲಿ ಹಿಮಾಚಲ ಪ್ರದೇಶ ಮತ್ತು ದಕ್ಷಿಣದಲ್ಲಿ ಉತ್ತರ ಪ್ರದೇಶ ರಾಜ್ಯಗಳು ಸುತ್ತುವರೆದಿವೆ. 16,826 ಗ್ರಾಮಗಳಲ್ಲಿ 86 ನಗರ ಪಟ್ಟಣಗಳೂ ಮತ್ತು 13 ಜಿಲ್ಲೆಗಳೂ ಇರುವ ಈ ರಾಜ್ಯದ ವಿಸ್ತಾರ 53,484 ಚ.ಕಿ.ಮೀ. 43,16,401 ಮಂದಿ ಗಂಡಸರು, 41,63,161 ಮಂದಿ ಮಹಿಳೆಯರೂ ಇರುವ ಈ ರಾಜ್ಯದ ಜನಸಂಖ್ಯೆ 84,79,562 (2001). ರಾಜಧಾನಿ ಡೆಹರಾಡುನ್ (ಡೆಹ್ರಾಡುನ್).
ಕೃಷಿ
ಈ ರಾಜ್ಯದ ಶೇ. 90 ಭಾಗ ಜನರು ವ್ಯವಸಾಯವನ್ನವಲಂಬಿಸಿಕೊಂಡಿದ್ದಾರೆ. 7,84,117 ಹೆಕ್ಟರ್ ಭೂಮಿಯಲ್ಲಿ ವ್ಯವಸಾಯ ಮಾಡಲಾಗುತ್ತಿದೆ. 5,51,054 ಹೆಕ್ಟರ್ ಪ್ರದೇಶ ನೀರಾವರಿಗೆ ಒಳಪಟ್ಟಿದೆ.
ವ್ಯವಸಾಯ ಮತ್ತು ಕೈಗಾರಿಕೆಗಳಿಗೆ ಬೇಕಾದ ವಿದ್ಯುತ್ ಇಲ್ಲಿ ಸಾಕಾಗುವಷ್ಟಿದೆ. ಯಮುನಾ ನದಿ, ಭಾಗೀರಥಿ, ಬಿಲಾಂಗನ, ಅಲಕಾನಂದ, ಮಂದಾಕಿನಿ, ಸರಯೂಗೌರಿ, ಕೋಸಿ ಮತ್ತು ಕಾಳಿ ಈ ಎಲ್ಲಾ ನದಿಗಳಿಂದ ಜಲವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈ ರಾಜ್ಯದ 16826 ಗ್ರಾಮಗಳ ಪೈಕಿ 12,973 ಗ್ರಾಮಗಳಿಗೆ ವಿದ್ಯುತ್ ಪುರೈಸಲಾಗಿದೆ.
ಖನಿಜ ಸಂಪತ್ತು ಮತ್ತು ಕೈಗಾರಿಕೆ
ಉತ್ತರಾಂಚಲ ರಾಜ್ಯ ವಿವಿಧ ಖನಿಜ ಸಂಪತ್ತನ್ನು ಹೊಂದಿದೆ. ಸುಣ್ಣಶಿಲೆ ಅಮೃತಶಿಲೆ, ರಾಕ್ಫಾಸ್ಟೇಟ್, ಡಾಲೊಮೈಟ್, ಮ್ಯಾಗ್ನೆಸೈಟ್, ತಾಮ್ರ, ಗ್ರಾಫೈಟ್ ಮತ್ತು ಜಿಪ್ಸ ಈ ಖನಿಜಗಳು ಹೇರಳವಾಗಿ ದೊರೆಯುತ್ತವೆ. ರಾಜ್ಯದಲ್ಲಿ 17,534 ಸಣ್ಣ ಕೈಗಾರಿಕೆಗಳಿದ್ದು ಸು. 59,659 ಮಂದಿಗೆ ಉದ್ಯೋಗ ನೀಡಿದೆ. 191 ದೊಡ್ಡ ಪ್ರಮಾಣದ ಕೈಗಾರಿಕೆಗಳಿದ್ದು ಇದರಲ್ಲಿ 2,694.66 ಕೋಟಿ ರೂಪಾಯಿ ಬಂಡವಾಳ ತೊಡಗಿಸಿದ್ದು 50,802 ಮಂದಿಗೆ ಉದ್ಯೋಗ ದೊರಕಿದೆ. ಹೆಚ್ಚಿನ ಕೈಗಾರಿಕೆಗಳು ಅರಣ್ಯೋತ್ಪಾದನೆಯ ಮೂಲದವು. ರಾಜ್ಯದಲ್ಲಿ ಒಟ್ಟು 54,047 ಗೃಹ ಕೈಗಾರಿಕಾ ಘಟಕಗಳಿದ್ದವು. 
ಸಾರಿಗೆ ಸಂಪರ್ಕ
ಉತ್ತರಾಂಚಲದಲ್ಲಿ 19,543 ಕಿಮೀ ಉತ್ತಮ ರಸ್ತೆಗಳಿವೆ. 17,545 ಕಿಮೀ ಇಲ್ಲಿನ ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿದೆ. 1,998 ಕಿಮೀ ಉದ್ದದ ರಸ್ತೆಯನ್ನು ಈ ರಾಜ್ಯದ ಸ್ಥಳೀಯ ಪಂಚಾಯಿತಿ ಮುಂತಾದವು ನಿರ್ಮಿಸಿವೆ. ಉತ್ತಮ ರೈಲ್ವೆ ಸಂಪರ್ಕ ಸೌಲಭ್ಯವೂ ಈ ರಾಜ್ಯಕ್ಕಿದೆ. ಡೆಹ್ರಾಡುನ್, ಹರಿದ್ವಾರ್, ರೂರ್ಕೀ, ಕೊಟದ್ವಾರ್, ಕಾಸಿಪುರ್, ಉಧಮ್ಸಿಂಗ್ನಗರ್, ಹಲ್ದ್ವಾನಿ, ರಾಮ್ನಗರ್ ಮತ್ತು ಕತ್ಕೊದಾಮ್ ಇವು ಇಲ್ಲಿನ ಮುಖ್ಯ ರೈಲು ನಿಲ್ದಾಣಗಳು. ಡೆಹ್ರಾಡುನ್ ಹತ್ತಿರವಿರುವ ಜಾಲಿಗ್ರಾಂಟ್, ಉಧಮ್ಸಿಂಗ್ನಗರ್ ಬಳಿಯ ಪಂತನಗರ್ ವಿಮಾನ ನಿಲ್ದಾಣಗಳಿವೆ. ಪಿತೋರ್ಗರ್ ಬಳಿಯ ನೈನಿ-ಸೆನ, ಚಮೋಲಿ ಬಳಿಯ ಗೌಚಾರ್ ಮತ್ತು ಉತ್ತರಕಾಶಿ ಹತ್ತಿರದ ಚಿನ್ಯಾಲಿಸೌರ್ ಈ ವಿಮಾನನಿಲ್ದಾಣಗಳು ನಿರ್ಮಾಣವಾಗುತ್ತಿವೆ. ಪವನ ಹಂಸ, ಸಂಸ್ಥೆಯವರು ಯಾತ್ರಿಗಳಿಗಾಗಿ ರುದ್ರಪ್ರಯಾಗ್ನಿಂದ ಕೇದಾರನಾಥಕ್ಕೆ ಹೆಲಿಕಾಪ್ಟರ್ ಸೌಕರ್ಯ ಕಲ್ಪಿಸಿದೆ.

ಈ ರಾಜ್ಯದ ಹರಿದ್ವಾರದಲ್ಲಿ ನಡೆಯುವ ಕುಂಭಮೇಳ, ಅರ್ಧಕುಂಭಮೇಳ ಬಹುಪ್ರಸಿದ್ಧ ವಾದವು. ಲಕ್ಷಾಂತರ ಮಂದಿ ಯಾತ್ರಿಗಳು ಹನ್ನೆರಡು ಮತ್ತು ಆರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಸೇರುತ್ತಾರೆ. ಚಂಪಾವತ್ನಲ್ಲಿ ನಡೆಯುವ ದೇವಿಧುರಮೇಳ, ಪೂರ್ಣಗಿರಿ ಉತ್ತರಕಾಶಿಯ ಮಾಘಮೇಳ, ಭಾಗೇಶ್ವರದ ಉತ್ತರೈನಿಮೇಳ, ಚಾನ್ಸರ್ವವರ್ನ ವಿಶುಮೇಳ, ರೂರ್ಕಿಯ ಪೀರನೆ ಕಲಿಯರ್ಮೇಳ ಚಾನ್ಸರ್ವವರ್ನ ವಿಶುಮೇಳ, ರೂರ್ಕಿಯ ಪೀರನೆ ಕಲಿಯರ್ ಮೇಳ ಮುಂತಾದವು ಜನಾಕರ್ಷಣೆಯ ಪ್ರಸಿದ್ಧ ಜಾತ್ರೆಗಳಾಗಿವೆ.

ಈ ರಾಜ್ಯದಲ್ಲಿ ಯಾತ್ರಿಗಳನ್ನು, ಪ್ರವಾಸಿಗರನ್ನೂ ಸೆಳೆಯುವ ಕೆಲವು ಪ್ರಸಿದ್ಧ ತಾಣಗಳಿವೆ. ಅವುಗಳಲ್ಲಿ ಗಂಗೋತ್ರಿ, ಯಮುನೋತ್ರಿ, ಬದರೀನಾಥ, ಕೇದಾರನಾಥ, ಹರಿದ್ವಾರ, ರಿಷಿಕೇಷ್, ಹೇಮ್ಕುಂಡಸಾಹೇಬ್, ನಾನಕ್ಮಠ್ ಮುಂತಾದವು. ಇಲ್ಲಿನ ಕುಮಾವ್ ಪ್ರದೇಶದಿಂದ ಕೈಲಾಸ ಮಾನಸಸರೋವರ ಯಾತ್ರೆ ಮಾಡುತ್ತಾರೆ. ಪ್ರಪಂಚ ಪ್ರಸಿದ್ಧ ಪುಷ್ಪಗಳ ಕಣಿವೆ, ಪಿಂಡಾರಿ ನೀರ್ಗಲ್ಲ ಪ್ರದೇಶ, ರೂಪ್ಕುಂಡ್, ದಯರ ಬುಗ್ಯಾಲ್, ಔಲಿ, ಇವುಗಳ ಜೊತೆಗೆ ಕಣಿವೆಗಳ ನಿಸರ್ಗ ಚೆಲುವಿನಿಂದ ಕೂಡಿದ ಮುಸ್ಸೋರಿ, ಡೆಹ್ರಾಡುನ್, ಚಕ್ರಾತ, ನೈನಿತಾಲ್, ರಾಣಿಕೇತ್, ಬಾಗೇಶ್ವರ, ಭೀಮ್ತಾಲ್ ಮತ್ತು ಕೌಸನಿ ಇವೆಲ್ಲ ಪ್ರವಾಸಿಗರನ್ನು ಸೆಳೆವ ಮುಖ್ಯ ಪ್ರವಾಸಿತಾಣಗಳಾಗಿವೆ.

ಉತ್ತರಾಂಚಲಕ್ಕೆ ಸಾಕಷ್ಟು ಪ್ರಾಚೀನ ಇತಿಹಾಸವಿದೆ. ಇದನ್ನು ಕೇರಾರ ಖಂಡ, ಮಾನಸಖಂಡ ಮತ್ತು ಹಿಮವಂತ ಎಂದು ಕರೆಯುತ್ತಿದ್ದರೆಂಬುದು ಕೆಲವು ಪುರಾತನ ಗ್ರಂಥಗಳಲ್ಲಿದೆ ಎಂಬುದನ್ನೂ ಉಲ್ಲೇಖಿಸಲಾಗಿದೆ. ಇಲ್ಲಿರುವ ಪುಣ್ಯ ಪವಿತ್ರ ಕ್ಷೇತ್ರಗಳು, ದೇವಸ್ಥಾನಗಳು ಮತ್ತು ಪುಣ್ಯ ನದಿ ತೀರ್ಥಗಳಿಂದಾಗಿ ಇದನ್ನು ದೇವಭೂಮಿ ಎಂದೂ ಕರೆಯುವುದುಂಟು. ಕ್ಷೇತ್ರದರ್ಶನಕ್ಕೆ ಬರುವವರೆಗೆ ಇಲ್ಲಿನ ಭೌಗೋಳಿಕ ಪ್ರಾಕೃತಿಕ ದೃಶ್ಯ ಚೇತೋಹಾರಿಯಾದದ್ದು. ಇಂತಹ ಈ ಭೂಮಿಯನ್ನು ಕುಶಾನರು, ಕುನಿನ್ದಾಸ್, ಕಾನಿಷ್ಕ, ಸಮುದ್ರಗುಪ್ತ, ಪೌರವರು, ಕಾತುರಿಗಳು, ಪಲಾಸರು ಮತ್ತು ಚಂದ್ರವಂಶಜರು, ಪೌರವಂಶಸ್ಥರು ಆಳಿದರು. ಕೊನೆಗೆ ಬ್ರಿಟಿಷರು ತಮ್ಮ ಆಡಳಿತ ನಡೆಸಿದ್ದರು.

ಈಗಿನ ಉತ್ತರಾಂಚಲ ರಾಜ್ಯ 1902ರಲ್ಲಿ ರಚಿಸಲಾದ ಆಗ್ರಾ ಮತ್ತು ಅವಧ್ನ ಸಂಯುಕ್ತ ಸಂಸ್ಥಾನದಲ್ಲಿ ಸೇರಿತ್ತು. 1935ರಲ್ಲಿ ಹೆಸರಿನಲ್ಲಿ ಅವಧ ಮತ್ತು ಆಗ್ರಾ ಇವನ್ನು ಬಿಟ್ಟು ಸಂಯುಕ್ತ ಸಂಸ್ಥಾನ ಎಂದು ನಾಮಕರಣ ಮಾಡಲಾಯಿತು. 1950 ಜನವರಿಯಲ್ಲಿ ಇದನ್ನು ಉತ್ತರ ಪ್ರದೇಶವೆಂದು ಕರೆಯಲಾಯಿತು. ಉತ್ತರಾಂಚಲ ಈ ಉತ್ತರ ಪ್ರದೇಶದ ಒಂದು ಭಾಗವಾಗಿ ಉಳಿಯಿತು. 2000 ದ ನವಂಬರ್ 9ನೇ ದಿನಾಂಕದಂದು ಉತ್ತರ ಪ್ರದೇಶದಿಂದ ಉತ್ತರಾಂಚಲ ಬೇರೆಯಾಗಿ ಭಾರತದ 27ನೇ ರಾಜ್ಯವಾಗಿ ಸೇರಿತು. ಈ ರಾಜ್ಯದ 13 ಜಿಲ್ಲೆಗಳ ವಿಸ್ತಾರ, ಜನಸಂಖ್ಯೆ ಮತ್ತು ಆಡಳಿತ ಕೇಂದ್ರದ ವಿವರ ಇಂತಿದೆ.
 ಜಿಲ್ಲೆ   ವಿಸ್ತಾರ( ಚ.ಕಿ.ಮೀ)  ಜನಸಂಖ್ಯೆ(೨೦೦೧)  ಆಡಳಿತ ಕೇಂದ್ರ ಉತ್ತರಕಾಶಿ  ೮,೦೧೬  ೨,೯೪,೧೭೯  ಉತ್ತರಕಾಶಿ ಚಮೋಲಿ  ೭,೫೨೦ ೩,೬೯,೧೬೮  ಗೋಪೇಶ್ವರ ರುದ್ರಪ್ರಯಾಗ್  ೨,೪೩೯  ೨,೨೭,೪೬೧  ರುದ್ರಪ್ರಯಾಗ್ ತೆಹರಿಘರವಾಲ್  ೩,೭೯೬  ೬,೦೪,೬೦೮  ನ್ಯೂತೆಹರಿ ಡೆಹ್ರಾಡೂನ್  ೩,೦೮೮  ೧೨,೭೯,೦೮೩  ಡೆಹ್ರಾಡೂನ್ ಘರವಾಲ್  ೫,೨೩೦  ೬,೯೬,೮೩೧  ಪೌರಿ ಪಿತೋರ್ಗರ್  ೭,೧೬೯  ೪,೬೨,೧೬೯  ಪಿತೋರ್ಗರ್ ಚಂಪಾವತ್  ೨,೦೪೪  ೨,೨೪,೪೬೧  ಚಂಪಾವತ್ ಆಲ್ಮೋರ  ೩,೬೮೯  ೬,೩೦,೪೪೬  ಆಲ್ಮೋರ ಬಾಗೇಶ್ವರ  ೧,೬೯೬  ೨,೪೯,೪೫೩  ಬಾಗೇಶ್ವರ ನೈನಿತಾಲ್  ೩,೪೨೨  ೭,೬೨,೯೧೨  ನೈನಿತಾಲ್ ಉಧಮ್ ಸಿಂಗ್ ನಗರ್  ೩,೦೨೫  ೧೨,೩೪,೫೪೮  ಉಧಮ್ ಸಿಂಗ್ ನಗರ್ (ರುದ್ರಾಪುರ) ಹರಿದ್ವಾರ್  ೨,೩೬೦  ೧೪,೪೪,೨೧೩  ಹರಿದ್ವಾರ್
ಉತ್ತರಕಾಶಿ, ಗೋಪೇಶ್ವರ, ರುದ್ರಪ್ರಯಾಗ್ ,ನ್ಯೂತೆಹರಿ, ಡೆಹ್ರಾಡೂನ್, ಪೌರಿ, ಪಿತೋರ್ಗರ್, ಚಂಪಾವತ್, ಆಲ್ಮೋರ, ಬಾಗೇಶ್ವರ, ನೈನಿತಾಲ್ ,ಉಧಮ್ ಸಿಂಗ್ ನಗರ್ (ರುದ್ರಾಪುರ), ಹರಿದ್ವಾರ್.			 

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ